ಸೋಮವಾರ, ಜುಲೈ 26, 2010

ಕೋಗಿಲೆ ಕಂಠ ಕರ್ಕಶ

ಆ ದಿನ ಬಿದ್ದ ಕಣ್ಣಿರ ಬಿಂದುಗಳು
ಹೀಗೆ ಬದುಕನ್ನು ಕೊಚ್ಚಿಕೊಂಡು ಹೋದವೆ?
ಯಾಕಾದರೂ ಬಂದಿತು ಆ ದಿನ, ಆ ಸಮಯ
ಕೋಗಿ ಕೂಡ ಕರ್ಕಶ


ತಾಳಿ, ಗಟ್ಟಿಮೇಳ, ರೆಶಿಮೆ
ಸೀರೆಗಳ ಸರಪರ ಸದ್ದಿನ ಗಾನ
ಪುನರ್ವಸು ಪುಷ್ಯದ ಸಡಗರಕ್ಕೆ
ಎಲ್ಲಿ ಕಾಣಬೇಕು ಕಣ್ಣೀರ ಬಿಂದುಗಳು


ಮರದ ಬಂಡಿಯ ಕುಲುಕಾಟ
ಪಯಣೀಸಲೇ ಬೇಕು,ಇರಲಿ......ಇಲ್ಲದಿರಲಿ
ಒಳ ಒಳಗೆ ಚಿತಾಗ್ನಿ, ಹೊರಗೆ
ಮೌನ ಮೀರಿ ನಗದಿದ್ದರೆ ?


ಬಿರುಗಾಳಿಗೂ ಮುನ್ನ ಮೌನ
ಒಮ್ಮೊಮ್ಮೆ ಭೂಮಿ ಸವರಿದಂತೆ ಬೀಗಬೇಕು
ಕಟ್ಟಿದ ಕನಸುಗಳೆಷ್ಟೋ ? ಬಯಕೆಗಳಿಗೆ
ಲೆಕ್ಕವಿಟ್ಟವರಾರು ?


ಒಳಗೆ ಸುಂಟರಗಾಳಿಯ ಮೊರೆತ
ಹೊರಗೆ ಲಾವಣ್ಯದ ಲಾಲಸ್ಯದ ನಗು
ಎಲ್ಲಿ ಕಾಣಬೇಕು ? ನನ್ನೊಳಗಿನ ಕಣ್ಣೀರು....