
ಮಂಗಳೂರಿನಲ್ಲಿ ವರದಿಗಾರನಾಗಿ ಕೆಲಸ ಮಾಡುವಾಗ, ಸಮೀಪದ ಸರ್ಕಾರಿ ಕಾಲೇಜೊಂದರಲ್ಲಿ ಮಧ್ಯಾಹ್ನದ ಊಟ ನೀಡುತ್ತಿದ್ದಾರೆ ಎಂಬ ಸುದ್ದಿ ಬಂತು. ಕಾಲೇಜು ಊಟದ ಬೆನ್ನತ್ತಿ ಹೋದಾಗ ತೆರೆದುಕೊಂಡ ಸತ್ಯಗಳೇ ಬೇರೆ. ವರ್ಷವೊಂದರ ಹಿಂದೆ ಬರೆದ ಈ ಲೇಖನವನ್ನು ಗಲ್ಫ್ ಕನ್ನಡಿಗ ತಾಣದವರು ಪ್ರಕಟಿಸಿದ್ದರು. ಮೊನ್ನೆ ಜಾಲ ಜಾಲಾಡುವಾಗ ಮತ್ತೆ ಈ ಸುದ್ದಿ ಕೈಗೆ ಸಿಕ್ತು. ಅಲ್ಲಿಂದ ನಕಲಿಸಿ, ಇಲ್ಲಿ ಹಾಕಿದ್ದೇನೆ..
--------
‘ಕಾಲೇಜು ಊಟದ’ ಬೆನ್ನಟ್ಟಿ ಹೋದಾಗ ತೆರೆದುಕೊಂಡ ಸತ್ಯಗಳೇ ಬೇರೆ. ಸರ್ಕಾರದ ನಯಾ ಪೈಸೆಯ ನೆರವೂ ಇಲ್ಲದೇ, ಉಪನ್ಯಾಸಕರು ಸ್ವಯಂ ಆಸಕ್ತಿ ವಹಿಸಿ ‘ಜೋಳಿಗೆ’ ಹಿಡಿಯುತ್ತಾ ವರ್ತಕರು, ದಾನಿಗಳಿಂದ ಹಣ, ಅಕ್ಕಿ, ಬೇಳೆ, ಧಾನ್ಯ ಸಂಗ್ರಹಿಸಿ ನಡೆಸುತ್ತಿ ರುವ ‘ಉಚಿತ ಕಾಲೇಜು ಊಟ’ದಿಂದಾಗಿ ಸರ್ಕಾರಿ ಕಾಲೇಜೊಂದು ಅದ್ಭುತ ಫಲಿ ತಾಂಶ ಪಡೆಯುವಲ್ಲಿ ಯಶಸ್ವಿಯಾದ ಕಥೆ ತೆರೆದುಕೊಂಡಿತು.
ಐದು ವರ್ಷಗಳ ಹಿಂದೆ ಈ ಕಾಲೇಜಿಗೆ ಮಕ್ಕಳನ್ನು ಸೇರಿಸಲು ಹಿಂದುಮುಂದು ನೋಡು ತ್ತಿದ್ದ ಪೋಷಕರೀಗ ತಮ್ಮ ಪ್ರತಿಭಾವಂತ ಮಕ್ಕಳನ್ನು ಸರ್ಕಾರಿ ಕಾಲೇಜಿಗೆ ಸೇರಿಸು ವಂತೆ ವಿಶ್ವಾಸದ ಭರವಸೆಯನ್ನು ಈ ‘ಊಚಿತ ಊಟ’ ತಂದುಕೊಟ್ಟಿರುವುದು ಅಚ್ಚರಿ ಎನಿಸುತ್ತದೆ.
ಮಂಗಳೂರಿನ ರಥಬೀದಿ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಐದು ವರ್ಷಗಳಿಂದಲೂ ಮಧ್ಯಾಹ್ನ ಉಚಿತ ಊಟ ನೀಡುತ್ತಿದ್ದೇವೆ. ಊಟಕ್ಕೆ ಗಂಜಿ ಊಟ, ಪಲ್ಯ, ಚಟ್ನಿ ನೀಡಲಾಗುತ್ತಿದೆ ಎಂಬ ವಿವರ ಕಾಲೇಜಿನ ಪ್ರಾಂಶುಪಾಲ ಪಿ.ಪಿ. ಜೋಸೆಫ್ (9448622864) ಅವರಿಂದ ಸಿಕ್ಕಿತ್ತು.
ಕಲೆ, ವಿಜ್ಞಾನ, ವಾಣಿಜ್ಯ ವಿಭಾಗ ಸೇರಿ ಒಟ್ಟು 492 ವಿದ್ಯಾರ್ಥಿನಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದು, ಇವರಲ್ಲಿ 80 ವಿದ್ಯಾರ್ಥಿನಿಯರು ಮಧ್ಯಾಹ್ನದ ಉಚಿತ ಊಟದ ಪ್ರಯೋ ಜನ ಪಡೆಯುತ್ತಿದ್ದಾರೆ. ಹಿಂದಿನ ವರ್ಷ 150 ವಿದ್ಯಾರ್ಥಿನಿಯರು ಊಟ ಮಾಡುತ್ತಿದ್ದರು.
ಕಳೆದ ವರ್ಷದವರೆಗೂ ಇದೇ ಕಾಲೇಜಿನ ಹೈಸ್ಕೂಲು ವಿದ್ಯಾರ್ಥಿಗಳಿಗೂ ಉಚಿತ ಊಟದ ಪ್ರಯೋಜನ ಸಿಕ್ಕುತ್ತಿತ್ತು. ಆದರೆ ಈ ವರ್ಷದಿಂದ ಹೈಸ್ಕೂಲು ವಿದ್ಯಾರ್ಥಿಗಳಿಗೆ ಸರ್ಕಾರದಿಂದಲೇ ಬಿಸಿಯೂಟ ನೀಡುತ್ತಿರುವುದರಿಂದ ಅವರನ್ನು ಕೈಬಿಡಲಾಗಿದೆ.
ಏನು ಕಾರಣ?:
ವಿದ್ಯಾರ್ಥಿನಿಯರು ಹೊಟ್ಟೆನೋವು, ತಲೆಸುತ್ತಿನಿಂದ ಬೀಳುತ್ತಿದ್ದ ಘಟನೆಗಳು ಕಾಲೇಜಿ ನಲ್ಲಿ ಪ್ರತಿದಿನ ನಡೆಯುತ್ತಲೇ ಇದ್ದವು. ಮಧ್ಯಾಹ್ನದ ನಂತರ ತರಗತಿ ಕಲಿಕೆಯಲ್ಲೂ ನಿರಾಸಕ್ತಿ ತೋರುತ್ತಿದ್ದರು. ವಿದ್ಯಾರ್ಥಿನಿಯರ ಈ ನಡವಳಿಕೆ ಬಗ್ಗೆ ಸೂಕ್ಷ್ಮವಾಗಿ ಕೇಳಿದಾ ಗ ಬಹಳಷ್ಟು ವಿದ್ಯಾರ್ಥಿನಿಯರು ತಿಂಡಿ. ಊಟ ಇಲ್ಲದೇ ಕಾಲೇಜಿಗೆ ಬರುತ್ತಿದ್ದಾರೆ ಎಂಬುದು ತಿಳಿಯಿತು. ಅಂದೇ ಮಕ್ಕಳಿಗೆ ಉಚಿತ ಊಟ ಕೊಡುವ ಚಿಂತನೆ ತಲೆ ಹೊಕ್ಕಿತು ಎನ್ನುತ್ತಾರೆ ಪಿ.ಪಿ. ಜೋಸೆಫ್.
ಉಚಿತ ಊಟದ ಪ್ರಸ್ತಾವವನ್ನು ಕಾಲೇಜು ಅಭಿವೃದ್ಧಿ ಮಂಡಳಿ ಮುಂದೆ ಇಟ್ಟಾಗ ಪೋತ್ಸಾಹವೂ ಸಿಕ್ಕಿತು. ಶಾಸಕ ಎನ್. ಯೋಗೀಶ್ ಭಟ್ ಅವರೂ ಕೈ ಜೋಡಿಸಿದರು. 2003ರಲ್ಲೇ ಊಟ ಆರಂಭಿಸಬೇಕೆಂದು ಹಟ ತೊಟ್ಟರೂ ಅದು ಸಾಧ್ಯವಾಗಲಿಲ್ಲ. ಕೊನೆ ಗೂ 2004ರಿಂದ ಉಚಿತ ಊಟ ನೀಡಲಾಗುತ್ತಿದೆ.
ಊಟಕ್ಕಾಗಿ ‘ಜೋಳಿಗೆ’ ಹಿಡಿಯುವ ಕಾಲೇಜಿನ ಪ್ರಾಂಶುಪಾಲರು, ಅಭಿವೃದ್ಧಿ ಮಂಡಳಿ ಯ ಸದಸ್ಯರಿಗೆ ದಾನಿಗಳು ಸಾಕಷ್ಟು ನೆರವಿನ ಹಸ್ತ ಚಾಚಿದ್ದಾರೆ. ಊಟಕ್ಕಾಗಿ ವರ್ತಕರು ಉಚಿತವಾಗಿ ಅಕ್ಕಿ, ಧಾನ್ಯ ನೀಡಿದರೆ, ಮತ್ತೆ ಕೆಲವರು ಹಣ ನೀಡುತ್ತಾರೆ. ಹೀಗೆ ಹಣ, ಧಾನ್ಯ ಸಂಗ್ರಹಿಸಿ ಮಕ್ಕಳಿಗೆ ಊಟ ನೀಡಲಾಗುತ್ತಿದೆ.
‘ಉಚಿತ ಊಟ ವ್ಯವಸ್ಥೆ ಅಚ್ಚುಕಟ್ಟಾಗಿ ನೆಡೆಯಲು ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ತೆರೆಯಲಾಗಿದ್ದು, ಖಾತೆಯಲ್ಲಿ ಹಣ ಖಾಲಿಯಾದ ನಿದರ್ಶನಗಳೇ ಇಲ್ಲಿಯವರೆಗೂ ಇಲ್ಲ’ ಎನ್ನುತ್ತಾರೆ ಕಾಲೇಜಿನ ವಾಣಿಜ್ಯ ಉಪನ್ಯಾಸಕ ಕೃಷ್ಣಮೂರ್ತಿ. ಎಲ್ಲ ವಿದ್ಯಾರ್ಥಿನಿಯರಿಗೂ ಉಚಿತ ಊಟವಿಲ್ಲ. ಕಾಲೇಜಿಗೆ ಪ್ರವೇಶ ನೀಡಿದ ನಂತರ ಎಲ್ಲರಿಗೂ ‘ಊಟದ ಪ್ರಶ್ನೆ ಪತ್ರಿಕೆ’ ನೀಡಲಾಗುವುದು. ಪ್ರಶ್ನೆಗಳ ಉತ್ತರ ಆಧರಿಸಿ ಮಕ್ಕ ಳ ಮನೆಯ ಪರಿಸ್ಥಿತಿಯನ್ನು ಗಮನಿಸಿ ಊಟ ನೀಡಲಾಗುವುದು. ಯಾವುದೇ ಕಾರಣಕ್ಕೂ ‘ಬಡತನ’ಎಂಬ ಶಬ್ದ ಎಲ್ಲೂ ಬಳಕೆ ಮಾಡುವುದಿಲ್ಲ. ಊಟ ಮಾಡುವುದರಿಂದ ವಿದ್ಯಾರ್ಥಿನಿಯರಲ್ಲಿ ಕೀಳರಿಮೆ ಕಾಡದಂತೆ ಎಚ್ಚರಿಕೆಯನ್ನು ವಹಿಸ ಲಾಗಿದೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸದಿದ್ದರೆ ಊಟ ಕಟ್ ಮಾಡುವ ಸಂಪ್ರದಾಯವನ್ನೂ ಪಾಲಿಸಲಾಗಿದೆ.
ಕಾಲೇಜಿನಲ್ಲಿ ಊಟ ಆರಂಭಿಸಿದ ನಂತರ ಕಾಲೇಜಿನ ಫಲಿತಾಂಶದಲ್ಲೂ ಗಣ ನೀಯ ಏರಿಕೆ ಕಂಡಿದೆ. ಐದು ವರ್ಷದ ಹಿಂದೆ ಶೇಕಡ 60ರಿಂದ 70ರ ಒಳಗೆ ಇದ್ದ ಫಲಿತಾಂಶ ಶೇಕಡ 93.5ರಷ್ಟಕ್ಕೆ ಹೆಚ್ಚಿದೆ. ಈ ವರ್ಷ ಶೇಕಡ 95ಕ್ಕೂ ಅಧಿಕ ಫಲಿತಾಂಶದ ನಿರೀಕ್ಷೆ ಯಲ್ಲಿ ಕಾಲೇಜು ಇದೆ.
‘ಬಡತನ, ಇನ್ನಿತರ ಕಾರಣಗಳಿಂದಾಗಿ ಸರ್ಕಾರಿ ಕಾಲೇಜಿನ ಅದರಲ್ಲೂ ಗ್ರಾಮೀಣ ಭಾಗದಿಂದ ಕಾಲೇಜಿಗೆ ಬರುವ ಮಕ್ಕಳು ಮಧ್ಯಾಹ್ನ ಊಟದಿಂದ ವಂಚಿತರಾಗುತ್ತಿದ್ದಾರೆ. ಊಟವಿಲ್ಲದೆ ಬಳಲಿ ಮನಸ್ಸಿನ ಮೇಲೆ ಏಕ್ರಾಗತೆ ಕಳೆದುಕೊಳ್ಳುವುದರಿಂದ ಅದು ಓದಿನ ಮೇಲೂ ಪರಿಣಾಮ ಬೀರುತ್ತದೆ. ಸರ್ಕಾರಿ ಕಾಲೇಜುಗಳ ಫಲಿತಾಂಶ ಕುಸಿಯಲು ಇರುವ ಕಾರಣಗಳಲ್ಲಿ ಇದು ಒಂದು’ ಎನ್ನುತ್ತಾರೆ ವೈದ್ಯರಾದ ಡಾ.ಲಲಿತಾ ರಮೇಶ್.
ಸರ್ಕಾರಿ ಕಾಲೇಜೆಂದರೆ ಅಲ್ಲಿ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿರುವ, ಮಾನಸಿಕ ಸಮಸ್ಯೆಗಳಿಂದ ನರಳುವ ಮಕ್ಕಳೇ ಹೆಚ್ಚಿರುತ್ತಾರೆ. ಈ ಮಕ್ಕಳಿಗೆ ಕನಿಷ್ಠ ಊಟ ನೀಡುವ ಮೂಲಕ ಧೈರ್ಯ ನೀಡಿದರೆ ಕಲಿಕೆಯಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಾರೆ ಎಂಬುದಕ್ಕೆ ರಥಬೀದಿ ಕಾಲೇಜು ಪ್ರಾಯೋಗಿಕ ಉದಾಹರಣೆಯಾಗಿದೆ.
‘ಕಾಲೇಜಿನಲ್ಲಿ ಉಚಿತ ಊಟ ಆರಂಭವಾದ ನಂತರ ಫಲಿತಾಂಶದಲ್ಲಿ ಗಣನೀಯ ಹೆಚ್ಚಳ ವಾಗಿದೆ. ಕಲಿಕೆಯಲ್ಲೂ ಮಕ್ಕಳ ಆಸಕ್ತಿ ಹೆಚ್ಚಿದೆ’ ಎನ್ನುತ್ತಾರೆ ಈ ಕಾಲೇಜಿನ ಉಪನ್ಯಾಸ ಕರು. ಕಾಲೇಜು ಕಲಿಯುತ್ತಿರುವ ‘ಅರ್ಹ’ ಮಕ್ಕಳಿಗೂ ಸರ್ಕಾರ ಬಿಸಿಯೂಟ ವಿಸ್ತರಿಸಿದರೆ ಸರ್ಕಾರಿ ಕಾಲೇಜುಗಳಲ್ಲೂ ಉತ್ತಮ ಫಲಿತಾಂಶದ ‘ಸಂತಸ’ ಕಾಣಬಹುದೇನೋ?
photo courtesy- THE HINDU
3 ಕಾಮೆಂಟ್(ಗಳು):
ತುಂಬಾ ಒಳ್ಳೆಯ story. ಒಳ್ಳೆಯ ಬ್ಲಾಗ್.
ಒಳ್ಳೆ ಲೇಖನ....
ಹೀಗೆ ಬರೆಯುತ್ತಿರಿ....
ಬ್ಲಾಗ್ ಶೀರ್ಷಿಕೆ ಇಷ್ಟವಾಯಿತು..
ನಿಮ್ಮ ಬ್ಲಾಗ್ ನೋಡುವಾಗ ಮಣ್ಣಿನ ವಾಸನೆ ಮೂಗಿಗೆ ಬಡಿಯುತ್ತಿದೆ.
ಹಸಿದ ಹೊಟ್ಟೆಗೆ ಮೊದಲು ಊಟ ಕೊಡಿ. ನಂತರ ಜ್ಞಾನ ಅನ್ನುತ್ತಾರೆ ವಿವೇಕಾನಂದರು. ಈ ನಿದರ್ಶನ ಆ ಹೇಳಿಕೆಗೆ ಉದಾಹರಣೆಯಾಗಿದೆ. ನಿಮ್ಮ ಲೇಖನಕ್ಕೆ ಜನರ
ಏಳ್ಗೆಯ ಆಸಕ್ತಿಯಿದೆ. ಮುಂದೆಯೂ ಇಂಥ ಲೇಖನಗಳನ್ನು ನಿರೀಕ್ಷಿಸುತ್ತೇನೆ.
ಸಾತ್ವಿಕ್ ಏನ್ ವಿ.
ಒಂದು ಕಮೆಂಟನ್ನು ಪೋಸ್ಟ್ ಮಾಡಿ